ಮೀರೆಳೆತ -
ಈ ಮೀರೆಳೆತ (ಮೀರಿ + ಎಳೆತ) ಸಾಲವು ಸಾವಧಿ ಠೇವಣಿ, ತಮ್ಮ ಗ್ರಾಹಕರಿಂದ ಬರಬೇಕಾದ ಸಾಲದ ಈಡು, ಸರಕು,ಸಾಮಗ್ರಿಗಳ ಈಡು, ರಾಷ್ಟ್ರೀಯ ಉಳಿತಾಯ ಪತ್ರ, ವೈಯಕ್ತಿಕ ಖಾತರಿ ಮೊದಲಾದ ಆಧಾರಗಳ ಮೇಲೆ ಮಂಜೂರು ಮಾಡುವ ಸಾಲವನ್ನು ಮೀರೆಳೆತ ಎಂದು ಕರೆಯಬಹುದು. ಸಂಸ್ಥೆಯ / ಕಂಪನಿಯ ದುಡಿಯುವ ಬಂಡವಾಳದ ಅವಶ್ಯಕತೆಯ ಪೂರೈಕೆಗಾಗಿ ಇದನ್ನು ಉಪಯೋಗಿಸಿಕೊಳ್ಳಬಹುದು. 
ವಾಣಿಜ್ಯ ಬ್ಯಾಂಕುಗಳು ನೀಡುವ ಹಲವಾರು ಸಾಲಗಳಲ್ಲಿ ಮೀರೆಳೆತದ ಸಾಲವು ಒಂದು ಮುಖ್ಯ ಪ್ರಭೇದ. ಈ ಮೀರೆಳೆತದ ಸಾಲವು ಸಾಮಾನ್ಯವಾಗಿ ಯಾವುದಾದರೂ ಭದ್ರತೆಯನ್ನು ಗ್ರಾಹಕರಿಂದ ತೆಗೆದುಕೊಂಡು ಮಂಜೂರು ಮಾಡುತ್ತಾರೆ. ಈ ರೀತಿ ಮಂಜೂರು ಮಾಡಿದ ಸಾಲಕ್ಕೆ ಗರಿಷ್ಟ ಮಿತಿಯನ್ನು ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಬ್ಯಾಂಕುಗಳ ಸಾವಧಿ ಠೇವಣಿ ಪತ್ರಗಳನ್ನು ಆಧಾರವನ್ನಾಗಿ ಇಟ್ಟುಕೊಂಡು ಠೇವಣಿಯ ಮೊತ್ತದ ಶೇಕಡಾ 75 ರಿಂದ 90 ರ ತನಕ ವಾಪಸ್ಸು ಪಡೆಯಬಹುದು. ಹಣವನ್ನು ಎಷ್ಟು ಹಿಂತೆಗೆಯುತ್ತಾರೋ ಅಷ್ಟಕ್ಕೆ ಮಾತ್ರ ಬಡ್ಡಿಯನ್ನು ವಿಧಿಸುತ್ತಾರೆ. ಮಧ್ಯದಲ್ಲಿ ಹಣವನ್ನು ವಾಪಸ್ಸು ಮಾಡಿದರೆ ಕೊಡಬೇಕಾದ ಬಡ್ಡಿಯ ಮೊತ್ತವು ಕಡಿಮೆಯಾಗುತ್ತದೆ. ಈ ಖಾತೆಯ ವಿಶೇಷಗಳೆಂದರೆ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿದರೆ ಉಳಿಕೆ ಮೊತ್ತಕ್ಕೆ ಮಾತ್ರ ಬಡ್ಡಿಯನ್ನು ವಿಧಿಸುತ್ತಾರೆ ಮತ್ತು ಮಿತಿಯು ಮತ್ತೆ ಹೆಚ್ಚುತ್ತದೆ. ನಿಗದಿ ಪಡಿಸಿದ ಮಿತಿಯವರೆಗೆ ಮತ್ತೆ ಹಣವನ್ನು ಹಿಂದಕ್ಕೆ ಪಡೆಯಬಹುದು. ಈ ಸಾಲವು ಸಾವಧಿಯಲ್ಲವಾದ್ದರಿಂದ ಜಮಾ-ಖರ್ಚುಗಳನ್ನು ಅವ್ಯಾಹತವಾಗಿ ಮಾಡಬಹುದು. ಇದರಿಂದ ಹಣದ ವಹಿವಾಟು ಗಾತ್ರ ಹೆಚ್ಚುತ್ತದೆ. ಮುಂದೆ ಬ್ಯಾಂಕುಗಳಿಂದ ಸಾಲವನ್ನು ನವೀಕರಿಸುವಾಗ ಈ ವಹಿವಾಟು ಗಾತ್ರ  ಅನುಕೂಲಕರವಾಗಿ ಪರಿಣಮಿಸುತ್ತದೆ.  ಆದರೆ ಪ್ರತಿ ವರ್ಷವೂ ಈ ಸಾಲದ ಮಿತಿಯನ್ನು ಪುನರ್ವಿಮರ್ಶಿಸಿ ಬ್ಯಾಂಕು ಮತ್ತೊಂದು ವರ್ಷಕ್ಕೆ ಲಂಬಿಸಿ ಕೊಡುತ್ತದೆ. ಆಗ ಗ್ರಾಹಕನು ಅದಕ್ಕೆ ಸಂಬಂಧಪಟ್ಟ ದಾಖಲಾತಿ, ಅಂಕಿ, ಅಂಶಗಳನ್ನು ಬ್ಯಾಂಕಿಗೆ ನೀಡಬೇಕಾಗುತ್ತದೆ.
ಇನ್ನು ಇತರ ವಿಧವಾದ ಮೀರೆಳೆತದ ಸಾಲಗಳೆಂದರೆ ಗ್ರಾಹಕರು ತಮಗೆ ಅವರ ಗ್ರಾಹಕರಿಂದ ಬರಬೇಕಾದ ಸಾಲವನ್ನು ಬ್ಯಾಂಕಿಗೆ ಈಡುಮಾಡು ಸಾಲವನ್ನು ಪಡೆಯಬಹುದು. ಇದೂ ಒಂದು ರೀತಿಯ ಮೀರೆಳೆತ. ವರ್ತಕರು ತಮ್ಮ ವ್ಯಾಪಾರದ ಸರಕುಗಳನ್ನು ಬ್ಯಾಂಕುಗಳಿಗೆ ಈಡುಮಾಡಿ ಸಾಲವನ್ನು ಪಡೆಯಬಹುದು. ಹೀಗೆ ಹಲವಾರು ರೀತಿಯಲ್ಲಿ ಮೀರೆಳೆತವನ್ನು ಬ್ಯಾಂಕುಗಳಿಂದ ಪಡೆಯಬಹುದು. ತಮ್ಮ ಸರಕನ್ನು ಈಡುಮಾಡಿ ಪಡೆದ ಮೀರೆಳೆತವನ್ನು ನಗದು ಉದರಿ ಎಂದು ಇನ್ನೊಂದು ಸಾಲದ ಮಿತಿಯಲ್ಲೂ ಪ್ರತ್ಯೇಕವಾಗಿ ಪಡೆಯಬಹುದು. ಅದು ಮೀರೆಳೆತ ಸಾಲಕ್ಕಿಂತ ಸ್ವಲ್ಪ ವಿಭಿನ್ನವಾದದ್ದು. 
(ನೋಡಿ- ನಗದು-ಉದರಿ)
(ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ